ಐಬಿಸ್: ಕ್ರೌಂಚ (ಹೆರಾನ್) ಮತ್ತು ಕೊಕ್ಕರೆಯ (ಸ್ಟಾರ್ಕ್) ಕುಟುಂಬಕ್ಕೆ ಸೇರಿದ ಒಂದು ನೀರುಹಕ್ಕಿ. ಇದರಲ್ಲಿ ಅನೇಕ ಪ್ರಭೇದಗಳಿವೆ. ಇವು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿವೆ. ಭಾರತದ ಹಲವೆಡೆಗಳಲ್ಲಿ ಕರ್ನಾಟಕ ರಾಜ್ಯದ ಅನೇಕ ಭಾಗಗಳಲ್ಲಿ ಹರಡಿವೆ. ಭಾರತದ ಹಲವೆಡೆಗಳಲ್ಲಿ ಕರ್ನಾಟಕ ರಾಜ್ಯದ ಅನೇಕ ಭಾಗಗಳಲ್ಲಿ ಬಿಳಿ ಮತ್ತು ಕರಿಯ ಎರಡು ಪ್ರಭೇದಗಳು ಕಾಣಸಿಗುತ್ತವೆ. ಐಬಿಸ್ ಹಕ್ಕಿ ಗಾತ್ರದಲ್ಲಿ ದೊಡ್ಡದು. ಕೊಕ್ಕು ಉದ್ದವಾಗಿ ಪಿಕಾಸಿಯ ಅಲಗಿನಂತೆ ಮುಂದಕ್ಕೆ ಬಾಗಿರುತ್ತದೆ. ಅನೇಕ ಬಗೆಯವಕ್ಕೆ ತಲೆಯ ಮೇಲೆ ಪುಕ್ಕಗುಚ್ಛವಿದೆ. ಬಿಳಿ ಮತ್ತು ಕರಿ ಐಬಿಸುಗಳಿಗೆ ಬಣ್ಣದಲ್ಲಿ ಮಾತ್ರ ವ್ಯತ್ಯಾಸವುಂಟು. ಅಮೆರಿಕದ ಉಷ್ಣವಲಯ ಪ್ರದೇಶಗಳಲ್ಲಿ ಕೆಂಪು ಐಬಿಸ್ ಇದೆ. ಕೆಂಪು ರೆಕ್ಕೆ ಪುಕ್ಕಗಳಿಗಾಗಿ ಈ ಹಕ್ಕಿಯನ್ನು ಎರಡು ಶತಮಾನ ಬೇಟೆಯಾಡಿದರಾಗಿ ಇದರ ವಂಶ ತೀರ ನಶಿಸಿಹೋಗಿದೆ. ಅಳಿದುಳಿದ ಕೆಲವು ಕುಟುಂಬಗಳನ್ನು ಕಾನೂನಿನ ಬಂಧನ ಹಾಕಿ ಈಗ ಕಾಪಾಡಲಾಗಿದೆ. 

ಐಬಿಸ್ ಹಕ್ಕಿಯ ಜೀವನ ಕ್ರಮವೆಲ್ಲ ಕ್ರೌಂಚ, ಬಕಗಳಂತೆಯೆ. ಇದು ಗುಂಪಿನಲ್ಲಿ ವಾಸಿಸುತ್ತದೆ. ಕೆಲವೇಳೆ ಒಂದು ಗುಂಪಿನಲ್ಲಿ ಸಾವಿರ ಹಕ್ಕಿಗಳಿರುವುದೂ ಉಂಟು. ನೀರಿನ ಆಶ್ರಯದಲ್ಲಿದ್ದು ಮೀನು, ಏಡಿ, ಕಪ್ಪೆ ಮೊದಲಾದುವನ್ನು ಇದು ಹಿಡಿದು ತಿನ್ನುತ್ತದೆ. ದೊಡ್ಡ ಮರದ ಕವೆಗೊಂಬಿನಲ್ಲಿ ಕಡ್ಡಿಗಳಿಂದ ಗೂಡು ಕಟ್ಟಿಕೊಂಡು ಇದು ವಾಸಿಸುತ್ತದೆ. ವಾಡಿಕೆಯಾಗಿ ಒಂದು ಬಾರಿಗೆ ಎರಡರಿಂದ ನಾಲ್ಕು ಮೊಟ್ಟೆ ಇಡುತ್ತದೆ.

ಈ ಹಕ್ಕಿ ಓಸಿರಿಸ್ ದೇವತೆಯ ದೂತವಾಗಿದ್ದುಕೊಂಡು ಮಾನವರು ಮಾಡುವ ತಪ್ಪುಗಳನ್ನೆಲ್ಲ ಎಣಿಕೆಹಾಕಿ ವರದಿ ಒಪ್ಪಿಸುತ್ತದೆಂದು ಈಜಿಪ್ಟಿನವರು ನಂಬಿದ್ದರು. (ಜಿ.ಎಂ.ಬಿ.)
ಪ್ರ.ಶ.ಪು. 3ನೆಯ ಶತಮಾನದಲ್ಲಿದ್ದ ಪ್ರಾಚೀನ ಗ್ರೀಕ್ ಕವಿ ಕಲ್ಲಿಮಾಕಸ್ ಮತ್ತು ಆತನ ಸ್ಪರ್ಧಿ ಅಪೊಲೋನಿಯಸ್-ಇವರ ಮಧ್ಯೆ ನಡೆದ ವಿರಸದಲ್ಲಿ ಜನಿಸಿದ ಪದ್ಯವೊಂದಕ್ಕೆ ಐಬಿಸ್ ಎಂಬ ಹೆಸರಿದೆ. ಇದರ ಪ್ರತಿ ಈಗ ಸಿಕ್ಕಿಲ್ಲದಿದ್ದರೂ ಓವಿಡ್ ಮತ್ತು ಸುಯಿದಾಸ್ ಕವಿಗಳು ಇದರ ಬಗ್ಗೆ ಹೇಳಿದ್ದಾರೆ. ಈ ಪದ್ಯದ ವಸ್ತು ಅಪೊಲೋನಿಯಸ್ ಮೇಲಿನ ಟೀಕೆ. ಐಬಿಸ್ ಎಂಬುದು ಈಜಿಪ್ಟಿನ ಹಕ್ಕಿ. ಅದು ನೋಡಲು ಅಂದವಿಲ್ಲ. ಕರ್ಕಶ ಧ್ವನಿಯೇ ಅದರ ಸ್ವರ. ಅದರ ಸ್ವಭಾವಗಳು ಬೇಸರ ತರಿಸುವಂಥವು. ಕಲ್ಲಿಮಾಕಸ್ ಅಪೊಲೋನಿಯಸನನ್ನು ಐಬಿಸ್ ಹಕ್ಕಿಗೆ ಹೋಲಿಸಿದ್ದಾನೆ. ಅಲ್ಲದೆ ಈ ಪದ್ಯಗಳ ಹಲವು ಭಾಗಗಳು ಸಮಸ್ಯಾತ್ಮಕವಾಗಿವೆಯೆಂದು ಹೇಳುತ್ತಾರೆ.

ಈ ವಿವರದಿಂದ ಐಬಿಸ್ ಹಕ್ಕಿಯ ವಿಷಯದಲ್ಲಿ ಈಜಿಪ್ಟಿನವರಿಗಿದ್ದ ಅಭಿಪ್ರಾಯ ಇನ್ನೂ ಸ್ಪಷ್ಟವಾಗುತ್ತದೆ.                                                 (ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ